Skip to main content
ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ "ನೀನೇ ರಾಜಕುಮಾರ".

ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ "ನೀನೇ ರಾಜಕುಮಾರ".

ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ "ನೀನೇ ರಾಜಕುಮಾರ".

Kannada

 ಸಿನಿಮಾ ರಂಗಕ್ಕೆ ಪತ್ರಕರ್ತರ ಕೊಡುಗೆ ಎಷ್ಟಿದೆಯೋ, ಸಿನಿಮಾ ರಂಗದವರಿಂದ ಪತ್ರಿಕೋದ್ಯಮಕ್ಕೂ ಅಷ್ಟೇ ಕೊಡುಗೆ ಇದೆ. ಇದೊಂದು ಕೊಡುಕೊಳ್ಳುವಿಕೆಯ ಸಂಬಂಧ. ಹಾಗಾಗಿ ಈ ರಂಗದಿಂದ ಯಾರನ್ನೇ ಕಳೆದುಕೊಂಡರೂ, ನಮ್ಮವರನ್ನೇ ಕಳೆದುಕೊಂಡಷ್ಟು ನೋವು, ಸಂಕಟ. ಪುನೀತ್ ರಾಜ್ ಕುಮಾರ್ ನಿಧನರಾದಾಗ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಂಬನಿ ಮಿಡಿದಿದ್ದಾರೆ. ಪತ್ರಕರ್ತ ಮಿತ್ರರು ಎಷ್ಟೊಂದು ಸಂಕಟ ಪಟ್ಟಿದ್ದಾರೆಂದು ಬಲ್ಲೆ. ಸ್ಟುಡಿಯೋದಲ್ಲಿ ಕೂತ ನಿರೂಪಕ-ನಿರೂಪಕಿಯರು ಅಳುತ್ತಲೇ ಸುದ್ದಿ ಓದಿದ್ದಾರೆ. ವರದಿಗಾರರು ಭಾವುಕರಾಗಿಯೇ ವರದಿ ಮಾಡಿದ್ದಾರೆ. ಇದಕ್ಕೆ ಕಾರಣ ಅಪ್ಪು ಅವರು ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ. ಯಾವತ್ತೂ ಅವರು ವರದಿಗಾರರ ಜತೆ ಮುನಿಸಿಕೊಂಡವರು ಅಲ್ಲ. ಫೋನಿಗೆ ಸಿಗದೇ ಸತಾಯಿಸಿದವರೂ ಅಲ್ಲ. ಮಿಸ್ಡ್ ಕಾಲ್ ಇದ್ದರೂ, ವಾಪಸ್ಸು ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಒಂದು ರೀತಿಯಲ್ಲೇ ಅವರು ನಮ್ಮವರೇ ಆಗಿದ್ದರು. ಈ ಪ್ರೀತಿ ಮತ್ತೆಂದು ಸಿಗದು. ಹಾಗಾಗಿ, ಅವರ ಜತೆಗಿನ ಒಡನಾಟವನ್ನು ದಾಖಲಿಸಬೇಕು ಮತ್ತು ಈ ಮೂಲಕ ಅವರ ಜೀವನವನ್ನು ಅಕ್ಷರ ರೂಪಕ್ಕೆ ಇಳಿಸಬೇಕು ಎನ್ನುವ ಉದ್ದೇಶದಿಂದ ‘ನಾನೇ ರಾಜಕುಮಾರ’ ಹೆಸರಿನಲ್ಲಿ ಅಪ್ಪು ಅವರ ಬಯೋಗ್ರಫಿ ಬರೆಯಬೇಕಾಯಿತು.

ಇದೊಂದು ರೀತಿಯಲ್ಲಿ ಸಿನಿಮಾ ಪತ್ರಕರ್ತರ ಪರವಾಗಿ ನಾನು ಸಲ್ಲಿಸುತ್ತಿರುವ ಪುಸ್ತಕದ ಗೌರವವಿದು. ಇಂಥದ್ದೊಂದು ಪುಸ್ತಕ ಬರೆಯಲು ಕಾರಣವಾಗಿದ್ದು 2 ಸೆಪ್ಟಂಬರ್ 2020. ನಾನು ಸುದೀಪ್ ಅವರ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಬರೆದಾಗ ಅದನ್ನು ಪ್ರೀತಿಯಿಂದ ಬಿಡುಗಡೆ ಮಾಡಿದ್ದು ಪುನೀತ್ ರಾಜ್ ಕುಮಾರ್ ಅವರು. ಸುದೀಪ್ ಅವರ ಹುಟ್ಟು ಹಬ್ಬದಂದು ಅವರು ಪುಸ್ತಕ ಬಿಡುಗಡೆ ಮಾಡಿದಾಗ ಖ್ಯಾತ ನಿರ್ಮಾಪಕರಾದ ಜಾಕ್ ಮಂಜು ಅವರು ‘ಮುಂದಿನ ಪುಸ್ತಕವನ್ನು ಅಪ್ಪು ಅವರದ್ದೇ ಮಾಡಿ ಅಂದರು. ಅಂದು ವೀರಕಪುತ್ರ ಶ್ರೀನಿವಾಸ್ ಅವರು ಕೂಡ ಇದ್ದರು. ‘ಅಯ್ಯೋ ನನ್ನ ಪುಸ್ತಕವಾ ಬೇಡ’ ಎಂದವರು, ಎಲ್ಲರ ಒತ್ತಾಯಕ್ಕೆ ಮಣಿದು ಅಪ್ಪು ಸರ್ ಒಪ್ಪಿಕೊಂಡರು. ಅಲ್ಲಿಂದ ನನ್ನ ಕೆಲಸವನ್ನು ಶುರು ಮಾಡಿದೆ. ನಂತರ ಅವರ ಭೇಟಿಗಾಗಿ ಹಲವು ಬಾರಿ ಕರೆ ಮಾಡಿದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆರು ತಿಂಗಳ ನಂತರ ಶೆರ್ಟನ್ ಹೋಟೆಲ್ ನಲ್ಲಿ ನಮ್ಮಿಬ್ಬರ ಭೇಟಿ ಆಯಿತು. ‘ನಾನು ಬೇಕು ಅಂತಾನೇ ನಿಮ್ಮ ಕರೆ ಸ್ವೀಕರಿಸಲಿಲ್ಲ. ನಾನೇನು ಸಾಧನೆ ಮಾಡಿಲ್ಲ. ಅಪ್ಪಾಜಿ ಮತ್ತು ಅಮ್ಮನ ಪುಸ್ತಕದ ಜತೆ ನನ್ನ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ.

ಒಂದ್ ಸಲ ನೀವೇ ಯೋಚ್ನೆ ಮಾಡಿ’ ಎಂದು ನಿರಾಸೆ ಮಾಡಿಬಿಟ್ಟರು. ಆದರೂ, ನಾನು ನನ್ನ ಹಠ ಬಿಡಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಲೇ ಇದ್ದೆ. ದಿಢೀರ್ ಆಗಿ ಅಪ್ಪು ಹೊರಟೇ ಬಿಟ್ಟರು. ಪುನೀತ್ ರಾಜ್ ಕುಮಾರ್ ಅವರು ನಿಧನದ ನಂತರ ಅವರ ಸಾಧನೆಗಳ ಪಟ್ಟಿ ಒಂದೊಂದೇ ಬರ ತೊಡಗಿದವು. ನಾಡೇ ಕಣ್ಣೀರಿಟ್ಟಿತು. ಆಗ ಮತ್ತೆ ನನಗೆ ನೆನಪಾಗಿದ್ದು ಅಪ್ಪು ಹೇಳಿದ ಮಾತು, “ಅಪ್ಪಾಜಿ ಮತ್ತು ಅಮ್ಮನ ಜತೆ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ” ಎನ್ನುವುದು. ಅವರ ಈ ಮಾತನ್ನು ಅಭಿಮಾನಿಗಳು ಸುಳ್ಳು ಮಾಡಿದರು. ನೀವು ಅಪ್ಪ ಅಮ್ಮನಷ್ಟೇ ಸಾಧನೆಯ ಹಾದಿಯಲ್ಲಿದ್ದೀರಿ ಎಂದು ತೋರಿಸಿದರು. ಮತ್ತೆ ನನ್ನ ಕನಸಿಗೆ ಮರುಜೀವ ಬಂತು. ಅಷ್ಟರಲ್ಲಿ ಕನ್ನಡದ ಖ್ಯಾತ ಪ್ರಕಾಶನ ಸಂಸ್ಥೆ ಜಮೀಲ್ ಸಾವಣ್ಣ ಅವರು ಪುಸ್ತಕದ ಬಗ್ಗೆ ವಿಚಾರಿಸಿದರು. ಮತ್ತೆ ಎಲ್ಲ ಸಂಗತಿಗಳನ್ನು ಒಟ್ಟಾಗಿಸಿ ಪುಸ್ತಕ ಮಾಡಿದೆ. ಈ ಹಿಂದೆ ನನ್ನ ‘ಅಂಬರೀಶ್’ ಪುಸ್ತಕವನ್ನು ಪ್ರಕಟಿಸಿರುವ ಸಾವಣ್ಣ ಪ್ರಕಾಶನವೇ ‘ನಾನೇ ರಾಜಕುಮಾರ’ ಪುಸ್ತಕವನ್ನು ಪ್ರಕಟಿಸಿದೆ. ಖ್ಯಾತ ಬರಹಗಾರ ಜೋಗಿ ಅವರು ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಮತ್ತೆ ಸಿನಿಮಾ ರಂಗಕ್ಕೆ ಬರುತ್ತಿರುವಾಗ ಈ ಸುದ್ದಿಯನ್ನು ಮೊದಲು ಪ್ರಕಟಿಸಿ, ಮೊದಲು ಸಂದರ್ಶನ ಮಾಡಿರುವ ಹಿರಿಯ ಪತ್ರಕರ್ತರಾದ ಮುರಳೀಧರ್ ಖಜಾನೆ ಅವರು ಮುನ್ನುಡಿ ಬರೆದಿದ್ದಾರೆ. ಡಾ.ಅಂಬರೀಶ್, ಡಾ.ವಿಷ್ಣುವಧರ್ನ್, ಕಿಚ್ಚ ಸುದೀಪ್ ಹಾಗೂ ಸಂಚಾರಿ ವಿಜಯ್ ಅವರ ಪುಸ್ತಕದ ನಂತರ ಸಿನಿಮಾ ರಂಗದವರ ಕುರಿತಾಗಿ ನಾನು ಬರೆದ ಮತ್ತೊಂದು ಪುಸ್ತಕ ಇದಾಗಿದೆ. ಪುಸ್ತಕದ ಕುರಿತು : ಪುನೀತ್ ರಾಜ್ ಕುಮಾರ್ ಕುರಿತಾಗಿ ಬರುತ್ತಿರುವ ಮೊದಲ ಬಯೋಗ್ರಫಿ ಇದಾಗಿದೆ. ಹಾಗಂತ ಬರೀ ಇದರಲ್ಲಿ ಪುನೀತ್ ಜೀವನ ಕುರಿತಾದ ವಿಷಯಗಳು ಮಾತ್ರವಿಲ್ಲ. ಅವರ ಬದುಕನ್ನು ಓದುತ್ತಾ, ಅದರೊಂದಿಗೆ ಸಿನಿಮಾ ಇತಿಹಾಸವನ್ನು ಓದಿಸಿಕೊಂಡು ಹೋಗುವಂತ ಗುಣವನ್ನು ಇದು ಹೊಂದಿದೆ. ಅವರ ವೃತ್ತಿ ಮತ್ತು ಖಾಸಗಿ ಜೀವನ ಕುರಿತಾದ ಅಪರೂಪದ ವಿಷಯಗಳನ್ನು ಮತ್ತು ಛಾಯಾಚಿತ್ರಗಳನ್ನು ಈ ಪುಸ್ತಕ ಒಳಗೊಂಡಿದೆ.

ಬಾಲ್ಯ, ಬಾಲ್ಯದಲ್ಲಿ ನಟಿಸಿದ ಸಿನಿಮಾಗಳು ಮತ್ತು ಅರಸು ಚಿತ್ರದಿಂದ ಜೇಮ್ಸ್ ಚಿತ್ರದವರೆಗಿನ ಸಮಗ್ರ ನೋಟ ಇಲ್ಲಿದೆ. ಅವರ ಖಾಸಗಿ ಬದುಕಿನ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿವೆ. ಒಟ್ಟು 264 ಪುಟಗಳ ಸಮಗ್ರ ಜೀವನ ಚರಿತ್ರೆಯ ಪುಸ್ತಕ ಇದಾಗಿದ್ದು, ಒಟ್ಟು 34 ಅಧ್ಯಾಯಗಳನ್ನು ಇದು ಒಳಗೊಂಡಿದೆ. ಅತೀ ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಆಗಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.