ನೈಂಟಿ ಹೊಡಿ ಮನೀಗ್ ನಡಿ "ಚಿತ್ರದ ಟೈಟಲ್ ಸಾಂಗ್.
ಅಮ್ಮಾ ಟಾಕೀಸ್ ಬಾಗಲಕೋಟೆ ಲಾಂಛನದಲ್ಲಿ, ರತ್ನಮಾಲಾ ಬಾದರದಿನ್ನಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಹಾಸ್ಯ ನಟ ಬಿರಾದಾರ್ ಮುಖ್ಯ ಭೂಮಿಕೆಯ
"ನೈಂಟಿ ಹೊಡಿ ಮನೀಗ್ ನಡಿ" ಚಿತ್ರದ *ಟೈಟಲ್ ಸಾಂಗ್* ಚಿತ್ರೀಕರಣವು ಇತ್ತೀಚೆಗೆ ಬೆಂಗಳೂರಿನ *ಎಚ್ ಎಮ್ ಟಿ* ಯಲ್ಲಿ ನೆರವೇರಿತು. ಕಿರಣ್ ಶಂಕರ್ ಸಂಗೀತದ ಈ ಹಾಡಿಗೆ ಸಾಹಿತ್ಯ ಚತುರ ಡಾ// ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ. ಇನ್ನು ಚುಟು-ಚುಟು ಖ್ಯಾತಿಯ ಭೂಷಣ್ ಕೊರಿಯೋಗ್ರಫಿ ಮಾಡಿದ್ದು, ಕೃಷ್ಣ ನಾಯ್ಕರ್ ಛಾಯಾಗ್ರಹಣ ಮಾಡಿದ್ದಾರೆ. ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಟೈಟಲ್ ಸಾಂಗ್ ಸೇರಿದಂತೆ ಚಿತ್ರದ ಮುಕ್ಕಾಲುಪಾಲು ಚಿತ್ರೀಕರಣ ಮುಗಿಸಲಾಗಿದೆ. ಮುಂದಿನ ಹಂತದ ಚಿತ್ರೀಕರಣ ಬಾಗಲಕೋಟೆ ಯಲ್ಲಿ ನಡೆಯಲಿದ್ದು ಚಿತ್ರತಂಡ ಸಜ್ಜಾಗುತ್ತಿದೆ ಎನ್ನುತ್ತಾರೆ ನಿರ್ದೇಶಕರು. ಅದ್ಧೂರಿ ಸೆಟ್ ನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆದ ಈ ಎಣ್ಣೆ ಹಾಡಿಗೆ ಬಿರಾದಾರ್ ಜೊತೆ ಹಿರಿಯ ನಟ ಕರಿಸುಬ್ಬು, ಹಾಸ್ಯ ನಟ ಪ್ರಶಾಂತ್ ಸಿದ್ಧಿ, ಆರ್. ಡಿ ಬಾಬು, ವಿವೇಕ್ ಜಂಬಗಿ ಹೆಜ್ಜೆ ಹಾಕಿದ್ದಾರೆ.
*ನೈಂಟಿ ಹೊಡಿ ಮನೀಗ್ ನಡಿ* ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, *ಹೇ.. ಒಲವಿನ ಚೆಲುವಿನ ಕುಡುಕರೆ ಕೇಳೀ.. ಈ ಕವಿತೆಯು ಸಮರ್ಪಣೆ ನಿಮಗೆ...* ಎಂದು ಶುರುವಾಗುವ ಈ ಹಾಡನ್ನು ಅಪರೂಪ ಎಂಬಂತೆ ಈವರೆಗೂ ಕನ್ನಡದಲ್ಲಿ ಐದು ಸಾವಿರಕ್ಕೂ ಹೆಚ್ಚು ಹಾಡಿಗೆ ಧ್ವನಿಯಾಗಿರುವ ಗಾಯಕ ರಾಜೇಶ್ ಕೃಷ್ಣನ್ ಟ್ರ್ಯಾಕ್ ಕೇಳಿ ಖುಷಿ ಪಟ್ಟು, ಸ್ವ- ಇಚ್ಛೆಯಿಂದ ಬಂದು ಧ್ವನಿ ನೀಡಿರುವುದು ಈ ಹಾಡಿನ ಹೆಗ್ಗಳಿಕೆಯಾಗಿದೆ.
ವಿಶೇಷವಾಗಿ ಸುಪ್ರಭಾತದ ರೇಂಜಿಗೆ ಪ್ರತಿ ಬಾರುಗಳಲ್ಲೂ ಸ್ವರ ಮೊಳಗ ಬೇಕೆಂಬ ಆಶಯವಿರುವ ಈ ಹಾಡು ಮದ್ಯಪ್ರೀಯರ ಎಣ್ಣೆ ಮೇಲಿನ ಅಭಿಮಾನ ಮತ್ತು ಎಣ್ಣೆಯ ಹೆಚ್ಚುಗಾರಿಕೆ ಹೇಳುವ ಹಾಡಾಗಿದ್ದು, ಪ್ರೇಕ್ಷಕ ಪ್ರಭುಗಳಿಗೆ ನಶೆ ಹತ್ತಿಸೋದು ಪಕ್ಕಾ ಅನ್ನೋದು ಚಿತ್ರತಂಡದ ನಂಬಿಕೆ.
Recent comments