ಮದ್ಯಪಾನ ಕೌಟುಂಬಿಕ ನೆಮ್ಮದಿ ಹಾಳು ಮಾಡುತ್ತದೆ; ಚಂದ್ರಶೇಖರ
ಮದ್ಯಪಾನ ಕೌಟುಂಬಿಕ ನೆಮ್ಮದಿ ಹಾಳು ಮಾಡುತ್ತದೆ; ಚಂದ್ರಶೇಖರ.
ಸಿರವಾರ ಡಿ16: ಮದ್ಯಪಾನವು ಕೌಟುಂಬಿಕ ನೆಮ್ಮದಿ, ಸಂತೋಷವನ್ನು ಹಾಳುಮಾಡುತ್ತದೆ. ಕುಡಿತದಿಂದ ಸಮಾಜದಲ್ಲಿ ನಯಾಪೈಸೆ ಗೌರವ ದಕ್ಕುವುದಿಲ್ಲ. ಮನುಷ್ಯನ ಅಧಃಪತನಕ್ಕೆ ಕುಡಿತ ಕಾರಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ವಿಭಾಗದ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ ಹೇಳಿದರು.
ತಾಲೂಕಿನ ಜಾಲಾಪೂರ ಕ್ಯಾಂಪ್ ನಲ್ಲಿ ಕಳೆದ 6 ದಿನಗಳಿಂದ ನಡೆಯುತ್ತಿರುವ 2018 ನೇ ಮದ್ಯವರ್ಜನ ಶಿಬಿರದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು. ಚಿನ್ನದಂತಹ ಬದುಕು ನಮ್ಮ ಮುಂದಿದೆ ಅದನ್ನು ಮದ್ಯದ ಅಮಲಿನಲ್ಲಿ ತೊಳೆದು ಹಾಕಬೇಡಿ, ಹೆತ್ತವರ ಮತ್ತು ನಿಮ್ಮನ್ನ ಕೈಹಿಡಿದು ಬಂದ ಪತ್ನಿ, ನಿಮ್ಮ ಮಕ್ಕಳು ಕುಟುಂಬಸ್ಥರಿಗೆ ಅನ್ಯಾಯ ಮಾಡದಿರಿ ಎಂದು ಶಿಬಿರಾರ್ಥಿಗಳನ್ನು ಮನಪರಿವರ್ತನೆಯತ್ತ ಕೊಂಡೊಯ್ದರು.
ಉಪನ್ಯಾಸ ನೀಡಿದ ಶಿಕ್ಷಕ ಮಹೇಶ ಕುಡಿತ ತಮ್ಮ ಜೀವನದಲ್ಲೂ ಅಗಾಧ ಪ್ರಮಾಣದ ಪರಿಣಾಮ ಬೀರಿದ ನೈಜ ಘಟನಾವಳಿಗಳನ್ನು ಬಿಚ್ಚಿಟ್ಟರು. ಮದ್ಯಪಾನ ದಿಂದ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಜೀವನದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ.ಕುಡಿತದ ಚಟ ಕುಟುಂಬ, ಬಂಧು ಬಳಗದಿಂದ ದೂರ ಮಾಡುತ್ತದೆ.
ಮದ್ಯವರ್ಜನ ಶಿಬಿರದಲ್ಲಿ ನಿಮ್ಮನ್ನು ತಿದ್ದಿ ತೀಡುವ ಕೆಲಸವಾಗುತ್ತಿದೆ ಅದರ ಸದುಪಯೋಗ ಪಡಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳಿ ಎಂದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಕೋಶಾಧಿಕಾರಿ ಜಿ ವೀರೇಶ ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಕೋಶಾಧಿಕಾರಿಗಳಾದ ಅಯ್ಯನಗೌಡ ಏರಡ್ಡಿ, ಜ್ಞಾನಮಿತ್ರ, ಪಟ್ಟಣ ಪಂಚಾಯತ್ ಅಧ್ಯಕ್ಷ ವೈ ಭೂಪನಗೌಡ,ಬಸವರಾಜ ದಳಪತಿ, ತಾಲೂಕು ಯೋಜನಾಧಿಕಾರಿ ಚಂದ್ರಹಾಸ ಬಿ, ಶಿಬಿರಾಧಿಕಾರಿ ನಂದಕುಮಾರ,ಆರೋಗ್ಯ ಸಹಾಯಕಿ ಶ್ರೀಮತಿ ನೇತ್ರಾವತಿ,ಯೋಗ ತರಬೇತುದಾರ ಮಹಾಂತೇಶ, ಮೇಲ್ವಿಚಾರಕರಾದ ಪ್ರಕಾಶ,ವನಿತಾ, ಲಲಿತಾ, ಪ್ರಮೋದ್ ಚಂದ್ರು ಸೇವಾ ಪ್ರತಿನಿಧಿಗಳು, ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
Recent comments