ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕ ಪಡೆದ ಲಕ್ಷ್ಯೆ ಸೇನ್
ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕ ಪಡೆದ ಲಕ್ಷ್ಯೆ ಸೇನ್

ಕೌಲಾಲಂಪುರ,:ಕಳೆದ ಭಾನುವಾರ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಗೆದ್ದ ಭಾರತದ ಯುವ ಆಟಗಾರ ಲಕ್ಷ್ಯ ಸೇನ್ ಅವರು ವೃತ್ತಿ ಜೀವನದ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಶ್ರೇಷ್ಠ ಸ್ಥಾನ ಪಡೆದಿದ್ದಾರೆ. ಮಂಗವಾರ ಬಿಡುಗಡೆಯಾಗಿರುವ ಶ್ರೇಯಾಂಕದಲ್ಲಿ ಭಾರತದ ಯುವ ಆಟಗಾರ 9 ಸ್ಥಾನಗಳಲ್ಲಿ ಏರಿಕೆ ಕಂಡು 32ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬಾಂಗ್ಲಾದೇಶ ಚಾಲೆಂಜ್ ಗೆಲ್ಲುವುದಕ್ಕೂ ಮುನ್ನ ಸೇನ್, ಕಳೆದ ಸೆಪ್ಟೆಂಬರ್‌ನಲ್ಲಿ ಬೆಲ್ಜಿಯಂ ಇಂಟ್‌ನ್ಯಾಷನಲ್ ಗೆದ್ದಿದ್ದರು.
ನಂತರ, ಡಚ್ ಓಪನ್ ಹಾಗೂ ಸಾರ್‌ಲೊರ್ ಲಕ್ಸ್ ಸೂಪರ್ ಟೂರ್ನಿಗಳಲ್ಲೂ ಚಾಂಪಿಯನ್ ಆಗಿದ್ದರು. ನವೆಂಬರ್‌ನಲ್ಲಿ ಸ್ಕಾಟೀಷ್ ಓಪನ್ ಕೂಡ ಮುಡಿಗೇರಿಸಿಕೊಂಡಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಭಾರತದ ಆಟಗಾರ ಐದು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಕಳೆದ ಭಾನುವಾರ ಢಾಕದಲ್ಲಿ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಫೈನಲ್ ಹಣಾಹಣಿಯಲ್ಲಿ ಮಲೇಷ್ಯಾದ ಲಿಯಾಮಗ್ ಜುನ್ ಹವೊ ವಿರುದ್ಧ 22-20, 21-19 ಅಂತರದಲ್ಲಿ ಜಯ ಸಾಧಿಸಿ ಚಾಂಪಿಯನ್ ಆಗಿದ್ದರು. ಬಿಡಬ್ಲ್ಯುಎಫ್ ಶ್ರೇಯಾಂಕದ ಅಗ್ರ 10ರಲ್ಲಿ ಭಾರತದ ಯಾವೊಬ್ಬರು ಸ್ಥಾನ ಪಡೆದಿಲ್ಲ. ಬಿ. ಸಾಯಿಪ್ರಣೀತ್ ಹಾಗೂ ಕಿಡಂಬಿ ಶ್ರೀಕಾಂತ್ ಕ್ರಮವಾಗಿ 11 ಮತ್ತು 12 ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪರುಪಳ್ಳಿ ಕಶ್ಯಪ್ 23ನೇ ಸ್ಥಾನದಲ್ಲಿದ್ದಾರೆ. ಮಹಿಳಾ ವಿಭಾಗದಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರು ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಹಣಾಹಣಿಯಲ್ಲಿ ಸಿಂಧು, ಅಕನೆ ಯಮಗುಚಿ ಮತ್ತು ಚೀನಾದ ಚೆನ್ ಯುಫಿ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರು. ಮೂರನೇ ಪಂದ್ಯದಲ್ಲಿ ಚೀನಾದ ಮತ್ತೊರ್ವ ಆಟಗಾರ್ತಿ ಬಿಂಗ್ಜಿಯೊ ವಿರುದ್ಧ ಗೆಲುವಿನ ಲಯಕ್ಕೆ ಮರಳಿದ್ದರು. ಆದರೆ, ಪ್ರಯೋಜನವಾಗಲಿಲ್ಲ. ಭಾರತದ ಮತ್ತೊರ್ವ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು 11ನೇ ಸ್ಥಾನದಲ್ಲಿದ್ದಾರೆ.
Recent comments