ಐಸಿಸಿ ಟೆಸ್ಟ್ ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ .
ಐಸಿಸಿ ಟೆಸ್ಟ್ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ಕೊಹ್ಲಿ, ಒಂದು ಸ್ಥಾನ ಕುಸಿದ ರಹಾನೆ
ದುಬೈ,: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಬಿಡುಗಡೆ ಮಾಡಿರುವ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲೇ ಅವರು ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಮರಳಿದ್ದರು.
ವಿರಾಟ್ ಕೊಹ್ಲಿ ಇದೀಗ 928 ಅಂಕಗಳನ್ನು ಹೊಂದಿದ್ದು, ಸ್ಮಿತ್ ಅವರು 17 ಅಂಕಗಳ ಅಂತರದಲ್ಲಿ ಹಿಂದಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಮೂರನೇ ಸ್ಥಾನ ಹಾಗೂ ಭಾರತ ತಂಡದ ಟೆಸ್ಟ್ ವಿಶೇಷ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ ಅವರು ಮೂರು ಸ್ಥಾನಗಳಲ್ಲಿ ಏರಿಕೆ ಕಂಡು ಐದನೇ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಪಾಕಿಸ್ತಾನದ ಬಾಬರ್ ಅಜಮ್ ಮೂರು ಸ್ಥಾನಗಳಲ್ಲಿ ಜಿಗಿದು ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕ ಆರನೇ ಸ್ಥಾನ ಪಡೆದಿದ್ದಾರೆ. ಅಜಿಂಕ್ಯಾ ರಹಾನೆ ಆರನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಇಳಿದಿದ್ದಾರೆ.
ನಂತರದ ಸ್ಥಾನಗಳಲ್ಲಿ ಡೇವಿಡ್ ವಾರ್ನರ್, ಜೋ ರೂಟ್ ಹಾಗೂ ರಾಸ್ ಟೇಲರ್ ಇದ್ದಾರೆ.
ಭಾರತದ ಇತರ ಇಬ್ಬರು ಬ್ಯಾಟ್ಸ್ಮನ್ಗಳಾದ ಮಯಾಂಕ್ ಅಗರ್ವಾಲ್ ಅವರು (12) ಮತ್ತು ರೋಹಿತ್ ಶರ್ಮಾ(15) ಅವರ ಅಗ್ರ 20ರೊಳಗೆ ಇದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ 360 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಕಳೆದ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಜಯಬೇರಿ ಬಾರಿಸಿತ್ತು.
ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದ ಫಲವಾಗಿ ಆಸ್ಟ್ರೇಲಿಯಾ 216 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಶ್ರೀಲಂಕಾ ವಿರುದ್ಧ ಕರಾಚಿ ಟೆಸ್ಟ್ ಗೆದ್ದ ಪಾಕಿಸ್ತಾನ 60 ಅಂಕಗಳನ್ನು ಸಂಪಾಧಿಸಿದೆ. ಇದರೊಂದಿಗೆ ಒಟ್ಟಾರೆ, 80 ಅಂಕಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಶ್ರೀಲಂಕಾ ಕೂಡ 80 ಅಂಕಗಳನ್ನು ಹೊಂದಿದೆ. ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಅಗ್ರ ಸ್ಥಾನದಲ್ಲಿ ಉಳಿದಿದ್ದಾರೆ.
ಭಾರತದ ಜಸ್ಪ್ರಿತ್ ಬುಮ್ರಾ ಅವರು ಆರನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಎರಡನೇ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಅಗ್ರ ಸ್ಥಾನದಲ್ಲಿದ್ದಾರೆ
Recent comments