ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಅವರಿಂದ "ಎರಡುಸಾವಿರದ ಇಪ್ಪತ್ತು ಗೋಪಿಕೆಯರು" ಚಿತ್ರದ ಹಾಡುಗಳ ಬಿಡುಗಡೆ.*
*ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಅವರಿಂದ "ಎರಡುಸಾವಿರದ ಇಪ್ಪತ್ತು ಗೋಪಿಕೆಯರು" ಚಿತ್ರದ ಹಾಡುಗಳ ಬಿಡುಗಡೆ.
ಚಿತ್ರ ಮಾಡುವ ನಿಟ್ಟಿನಲ್ಲಿ ಮೂರು ಪ್ರಮುಖ ಹಂತಗಳಿರುತ್ತವೆ. ಮೊದಲನೆಯದು ಬರವಣಿಗೆಯ ಹಂತ. ಚಿತ್ರಕಥೆ ಎನ್ನುವುದು ಸವಾಲಿನ ಕೆಲಸ. ಏಕಾಂಗಿಯಾಗಿ ಚಿತ್ರಕಥೆ ಬರೆಯುವುದಕ್ಕೆ ಸಾಧ್ಯವಿಲ್ಲ. ಬರೆದೂ ಇಲ್ಲ ಎಂಬುದು ನನ್ನ ನಂಬಿಕೆ. ಗುಂಪಿನಲ್ಲಿ ಚರ್ಚೆ ಮಾಡಿಕೊಂಡು, ಮಾತಾಡಿಕೊಂಡು ಮಾಡುವ ಕ್ರಿಯೆ ಅದು. ನಾನು, ನಮ್ಮ ಚಿತ್ರದ ನಿರ್ದೇಶಕ ನಾರಾಯಣಸ್ವಾಮಿ ಒಂದೂವರೆ ವರ್ಷಗಳ ಕಾಲ ಕೂತು ಚಿತ್ರಕಥೆ ಮಾಡಿದ್ದೇವೆ. ಎರಡನೆಯ ಹಂತ ಚಿತ್ರೀಕರಣ. ಮೂರನೆಯ ಹಂತ ಹಾಡುಗಳಿಗೆ ಸಂಗೀತ ಅಳವಡಿಸುವುದು. ಯಾವುದೇ ಚಿತ್ರದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸಬೇಕಾದರೆ ಒತ್ತಾಸೆಯಾಗಿ ಸಂಗೀತ ಇರಬೇಕಾಗುತ್ತದೆ. ಮೂಲಧಾರೆಯ ಸಿನಿಮಾಗಳಲ್ಲಿ ಸಂಗೀತ ಪ್ರಧಾನ ಪಾತ್ರ ವಹಿಸುತ್ತದೆ. ನನಗೆ ವೈಯಕ್ತಿಕವಾಗಿ ಈ ಮೂರನೆಯ ಹಂತ ಬಹಳ ಇಷ್ಟದ್ದು. , ಮೂರು ಹಾಡುಗಳು ನಮ್ಮ ಚಿತ್ರದಲ್ಲಿದೆ. ಹಾಡು ಎಂದರೆ ಬರೀ ಸಂಗೀತವಷ್ಟೇ ಅಲ್ಲ, ಅದಕ್ಕೆ ಪೂರಕವಾಗಿ ಸಾಹಿತ್ಯ ಬೇಕು. ಅದು ಅದ್ಭುತ ಪ್ರಕ್ರಿಯೆ. ದೊಡ್ಡದೊಡ್ಡ ಕವಿಗಳು ಚಿತ್ರಗೀತೆ ಬರೆಯುವುದಕ್ಕೆ ಹೋಗಿ ಕಷ್ಟಪಟ್ಟಿದ್ದನ್ನು ನಾವು ನೋಡಿದ್ದೇವೆ. ಕಥೆಗೆ, ಸನ್ನಿವೇಶಕಕ್ಕೆ ಮತ್ತು ನಿರ್ದೇಶಕರ ಕಲ್ಪನೆಗೆ ತಕ್ಕ ಹಾಗೆ ಹಾಡುಗಳನ್ನು ಬರೆಯುವುದು ಸುಲಭವಲ್ಲ. ಹೃದಯಶಿವ, ಗೌಸ್ಪೀರ್ ಮತ್ತು ಮಹೇಂದ್ರ ಗೌಡ, ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಶ್ರೀಧರ್ ಸಂಗೀತ ಸಂಯೋಜಕರಷ್ಟೇ ಅಲ್ಲ, ಒಳ್ಳೆಯ ಸಾಹಿತ್ಯ ಅಭಿರುಚಿ ಇದೆ. ಅವರೇ ಬರೆಯಬಲ್ಲರು.
ಆದರೆ, ಬರೆಯುತ್ತಿಲ್ಲ ಅಷ್ಟೇ. ಸಾಹಿತ್ಯವು ಸಂಗೀತಕ್ಕೆ ಹೊಂದುತ್ತದೋ ಇಲ್ಲವೋ ಎಂಬುದು ಅವರು ಚೆನ್ನಾಗಿ ಜಡ್ಜ್ ಮಾಡುತ್ತಾರೆ. ರವಿಕಾಂತೇಗೌಡರು ಬರೀ ಒಬ್ಬ ಪೊಲೀಸ್ ಅಧಿಕಾರಿಯಲ್ಲ. ಅವರೊಬ್ಬ ಸಾಹಿತಿ. ಅವರ ತಂದೆ ಬೆಸಗರಹಳ್ಳಿ ರಾಮಣ್ಣ, ಕನ್ನಡದ ಜನಪ್ರಿಯ ಕಥೆಗಾರ. ಇವರು ಸಹ ಸಾಹಿತ್ಯ ರಚಿಸಿದ್ದಾರೆ. ಬಹುಶಃ ನಿವೃತ್ತಿಗಾಗಿ ಕಾಯುತ್ತಿದ್ದಾರೆ ಅಂದುಕೊಂಡಿದ್ದೇನೆ. ಆಮೇಲೆ ಅವರ ಹಲವು ಪುಸ್ತಕಗಳು ಪ್ರಕಟವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಅವರಿಗೆ ಆಹ್ವಾನ ಕಳಿಸಿದಾಗ, ವಾಟ್ಸಾಪ್ನಲ್ಲೇ ಕವನ ಕಳಿಸಿದರು.
ಬಹಳ ಖುಷಿಯಾಯಿತು. ಒಳ್ಳೆಯ ಸಾಲುಗಳಿವೆ. ಅವರು ಇಂದು ಮುಖ್ಯ ಅತಿಥಿಯಾಗಿ ಬಂದಿರುವುದು ಸಂತೋಷ ಎಂದರು ಚಿತ್ರವನ್ನು ನಿರೂಪಿಸುತ್ತಿರುವ ಕುಚ್ಚಣ್ಣ ಶ್ರೀನಿವಾಸ್. ನನ್ನ ಸೀನಿಯರ್ ಆದ ಕುಚ್ಚಣ್ಣ ಶ್ರೀನಿವಾಸ್ ಅವರು, ನನಗೆ ಸಿನಿಮಾ ನಿರ್ಮಾಣದ ಬಗ್ಗೆ ತಿಳಿಸಿದ್ದರು.ಈಗ ಆಡಿಯೋ ಬಿಡುಗಡೆಗೆ ನನ್ನ ಆಹ್ವಾನಿಸಿದ್ದಾಗ, ಚಿತ್ರ ಈಗಾಗಲೇ ಬಿಡುಗಡೆ ಹಂತಕ್ಕೆ ಬಂದಿರುವ ಸುದ್ದಿ ತಿಳಿದು ಸಂತೋಷವಾಯಿತು. ಮಲೆಯಾಳಂ, ತಮಿಳು ಭಾಷೆಗಳಲ್ಲಿ ಕಡಿಮೆ ದುಡ್ಡು ಖರ್ಚು ಮಾಡಿ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ. ಅಲ್ಲಿ ಆ ಚಿತ್ರಗಳು ಯಶಸ್ವಿಯಾಗಿದುಂಟು. ಈ ಚಿತ್ರದ ಬಗ್ಗೆ ಕೇಳಿದಾಗ ನನಗೂ ಉತ್ತಮವಾದ ಕಥೆಯುಳ್ಳ ಚಿತ್ರವೆನಿಸುತ್ತಿದೆ. ನಾವು ಕೂಡ ಉತ್ತಮ ಚಿತ್ರಗಳನ್ನು ಪ್ರೋತ್ಸಾಹಿಸಬೇಕು ಇಲ್ಲವಾದಲ್ಲಿ, ಕೆಟ್ಟ ಚಿತ್ರಗಳನ್ನು ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಚಿತ್ರದ ಹಾಡುಗಳನ್ನು ಕೇಳಿದಾಗ ಕಿವಿಗೆ ಇಂಪಾಯಿತು.
ಶ್ರೀಧರ್ ಒಳ್ಳೆಯ ಸಂಗೀತ ನೀಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ ಮುಖ್ಯ ಅತಿಥಿ ರವಿಕಾಂತೇ ಗೌಡ ಅವರು ತಮ್ಮ ಮಾತಿನ ಮಧ್ಯದಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾದರು. ಹಾಡುಗಳ ಬಗ್ಗೆ, ಹಾಡುಗಾರರ ಬಗ್ಗೆ ಸಾಹಿತ್ಯದ ಬಗ್ಗೆ ಸಂಗೀತ ನಿರ್ದೇಶಕ ಶ್ರೀಧರ್ ವಿವರಣೆ ನೀಡಿದರು. ಕಲಾವಿದರಾದ ಬಾಲಾಜಿ ಶರ್ಮ ಹಾಗೂ ನಂದೀಶ್ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು.
Recent comments