Skip to main content
ಚಿತ್ರನಿರ್ದೇಶಕ ನಾಗೇಶ್ ಬಾಬ ಇನ್ನಿಲ್ಲ

ಚಿತ್ರನಿರ್ದೇಶಕ ನಾಗೇಶ್ ಬಾಬ ಇನ್ನಿಲ್ಲ

ಚಿತ್ರನಿರ್ದೇಶಕ ನಾಗೇಶ್ ಬಾಬ ಇನ್ನಿಲ್ಲ.

Kannada new film

ಹಿರಿಯ ಚಿತ್ರನಿರ್ದೇಶಕ ನಾಗೇಶ್ ಬಾಬ (82) ಅಗಲಿದ್ದಾರೆ. ಮಂಡ್ಯ ಜಿಲ್ಲೆ ಬೆಳಕವಾಡಿ ಅವರ ಹುಟ್ಟೂರು. ಬೆಂಗಳೂರಿನಲ್ಲಿ ಬಿಎಸ್ಸಿ ಪದವಿ ಮುಗಿಸಿದ ಅವರು ಚಿತ್ರರಂಗದಲ್ಲಿ ಕೆಲಸ ಮಾಡುವ ಇರಾದೆಯಿಂದ 1956ರಲ್ಲಿ ಮದರಾಸಿಗೆ ತೆರಳುತ್ತಾರೆ. ಆರ್.ನಾಗೇಂದ್ರರಾವ್ ನಿರ್ದೇಶನದ ‘ಪ್ರೇಮದ ಪುತ್ರಿ’ (1957) ಚಿತ್ರದ ಸಹಾಯಕ ನಿರ್ದೇಶಕರಾಗಿ ಅವರ ಚಿತ್ರರಂಗದ ನಂಟು ಆರಂಭವಾಯ್ತು. ‘ಬೆಟ್ಟದ ಕಳ್ಳ’, ‘ಪ್ರತಿಮಾ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ನಾಗೇಶ್ ಬಾಬ ಅವರು ‘ಕೋಟಿ ಚೆನ್ನಯ’ ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ದುಡಿದಿದ್ದಾರೆ. ‘ತೂಗುದೀಪ’, ‘ನನ್ನ ಕರ್ತವ್ಯ’ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ.

Kannada new film

‘ಅನಿರೀಕ್ಷಿತ’ (1970) ಅವರು ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ. ಕೃಷ್ಣಮೂರ್ತಿ ಪುರಾಣಿಕರ ‘ವಸುಂಧರೆ’ ಕೃತಿಯನ್ನು ಆಧರಿಸಿದ ಪ್ರಯೋಗವಿದು. ಚಿತ್ರಕ್ಕೆ ವಿಜಯಭಾಸ್ಕರ್ ಸಂಯೋಜಿಸಿದ ಎರಡು ಟ್ಯೂನ್‌ಗಳಿಗೆ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಮದರಾಸಿಗೆ ತೆರಳಿ ಗೀತೆ ರಚಿಸಿಕೊಟ್ಟಿದ್ದು ವಿಶೇಷ. ಈ ಸಿನಿಮಾ ತೆರೆಕಂಡು ಈ ಹೊತ್ತಿಗೆ ಐವತ್ತು ವರ್ಷ. ಕನ್ನಡ ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣ ವಿಭಾಗದಲ್ಲಿ ನಾಗೇಶ್ ಬಾಬ ಅವರ ಕೊಡುಗೆ ಸ್ಮರಣೀಯ. ಮದರಾಸಿನಲ್ಲಿ ವೆಂಕಟೇಶ್ವರನ್ ಅವರೊಡಗೂಡಿ ‘ತ್ರೀ ಸ್ಟಾರ್ಸ್’ ಸ್ಥಿರಚಿತ್ರ ಛಾಯಾಗ್ರಹಣ ಸಂಸ್ಥೆ ಆರಂಭಿಸಿದರು (1964).

Kannada new film

ಮುಂದೆ ಬೆಂಗಳೂರಿಗೆ ಮರಳಿದ ನಂತರ ಗಾಂಧಿನಗರದ 6ನೇ ಕ್ರಾಸ್‌ನಲ್ಲಿ ‘ಪ್ರಗತಿ’ ಸ್ಟುಡಿಯೋ ಆರಂಭಿಸಿದರು (1972). ಸಹೋದರ (ಚಿಕ್ಕಪ್ಪನ ಮಗ) ಅಶ್ವತ್ಥ ನಾರಾಯಣ ಅವರು ನಾಗೇಶ್ ಬಾಬರಿಗೆ ಇಲ್ಲಿ ಜೊತೆಯಾದರು. ಮುಂದೆ ‘ಪ್ರಗತಿ’ ಸ್ಟುಡಿಯೋ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸ್ಥಾನ ಪಡೆಯಿತು. ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಿಗೆ ‘ಪ್ರಗತಿ’ಯ ಸ್ಥಿರಚಿತ್ರ ಛಾಯಾಗ್ರಾಹಣವಿದೆ. ಚಿತ್ರನಿರ್ದೇಶಕರು, ನಟ-ನಟಿಯರಿಗೆ ‘ಪ್ರಗತಿ’ ಆಗ ಮೀಟಿಂಗ್ ಪಾಯಿಂಟ್ ಆಗಿತ್ತು. ಚಿತ್ರರಂಗದಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಲ್ಲದೆ ತೆರೆಮರೆಯಲ್ಲಿ ಕನ್ನಡ ಸಿನಿಮಾಗೆ ನಾಗೇಶ್ ಬಾಬ ಅವರ ಕೊಡುಗೆ ದೊಡ್ಡದಿದೆ. ಹಲವು ವರ್ಷಗಳ ಕಾಲ ಅವರು ಮದರಾಸಿನಲ್ಲಿದ್ದ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೂಪರಿಂಟೆಂಡ್ ಆಗಿ ಕಾರ್ಯನಿರ್ವಹಿದ್ದರು. ಆಗೆಲ್ಲಾ ಕನ್ನಡ ನಿರ್ಮಾಪಕರು, ನಿರ್ದೇಶಕರಿಗೆ ತಮ್ಮ ಶಿಫಾರಸು ಬಳಸಿ ಕಚ್ಛಾ ಫಿಲ್ಮ್ ದೊರಕಿಸಿಕೊಡುವಲ್ಲಿ ನೆರವಾಗುತ್ತಿದ್ದರು. 2005ರಲ್ಲಿ ‘ಪ್ರಗತಿ’ ಸ್ಟುಡಿಯೋ ಕಾರ್ಯ ಸ್ಥಗಿತಗೊಳಿಸಿದ ನಂತರ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದರು. ಅದ್ವೈತವನ್ನು ಪ್ರತಿಪಾದಿಸಿದ ನಿಸರ್ಗದತ್ತ ಮಹಾರಾಜ್ ಅವರ ಕುರಿತು ನಾಗೇಶ್ ಬಾಬ ಅವರು ತಯಾರಿಸಿದ (2009) ‘ತತ್ವಮಸಿ – ಯು ಆರ್ ದಟ್’ 87 ನಿಮಿಷಗಳ ಇಂಗ್ಲಿಷ್ ಸಾಕ್ಷ್ಯಚಿತ್ರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನಗೊಂಡಿದೆ. ಮರಾಠಿಯಲ್ಲೂ (ನಿರ್ಗುಣಚೆ ಭೇದಿ) ಈ ಸಾಕ್ಷ್ಯಚಿತ್ರ ತಯಾರಾಗಿದೆ.

ಜೆಮಿನಿ ಸ್ಟುಡಿಯೋ ಮಾಲೀಕರಾದ ಎಸ್.ಎಸ್.ವಾಸನ್ ಅವರ ಬಗ್ಗೆ ನಾಗೇಶ್ ಬಾಬ ಪುಸ್ತಕ ರಚಿಸಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ನೇರವಾಗಿ, ಪರೋಕ್ಷವಾಗಿ ನಾಗೇಶ್ ಬಾಬ ಅವರ ಕೊಡುಗೆ ಸ್ಮರಣೀಯ. ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ನಾಗೇಶ್ ಬಾಬ ಅವರು ಪತ್ನಿ ಶ್ಯಾಮಲಾ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. 

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.