ಪ್ರಜಾ ಸೇವಾ ಅಭಿಯಾನಕ್ಕೆ ಸೆ 5ರಂದು ಚಾಲನೆ
ಪ್ರಜಾಸೇವಾ ಅಭಿಯಾನಕ್ಕೆ ಸೆ.5ರಂದು ಕೂಡ್ಲಿಗಿಯಲ್ಲಿ ಚಾಲನೆ
ಸ್ಥಳದಲ್ಲಿಯೇ ಅಹವಾಲು ಸ್ವೀಕಾರ, ಅರ್ಜಿ ಸಲ್ಲಿಕೆ ಹಾಗೂ ಸೇವೆಗಳ ಪರಿಹಾರಕ್ಕೆ ಅವಕಾಶ.
ಬೆಂಗಳೂರು:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ರಚಿಸಿರುವ ನೂತನ **ಪ್ರಜಾಸೇವಾ ಇಲಾಖೆಯ ಮೊದಲ ಪ್ರಜಾಸೇವಾ ಅಭಿಯಾನಕ್ಕೆ ಸೆಪ್ಟೆಂಬರ್ 5ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಲ್ಲಿ ಚಾಲನೆ ದೊರೆಯಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಪ್ರಜಾಸೇವಾ ಅಭಿಯಾನ ಸಭೆಯಂದು ಸಾರ್ವಜನಿಕರ ಅಹವಾಲುಗಳನ್ನು **ಎರಡು ಪ್ರತ್ಯೇಕ ಸರತಿಗಳಲ್ಲಿ** ಸ್ವೀಕರಿಸಿ ನಿರ್ವಹಿಸಲಾಗುತ್ತದೆ. ಮೊದಲ ಸರತಿಯಲ್ಲಿ ಸಾರ್ವಜನಿಕರು ಮೊದಲ ಬಾರಿಗೆ ಸಲ್ಲಿಸುವ ಹೊಸ ಅಹವಾಲುಗಳನ್ನು ದಾಖಲಿಸಲಾಗುತ್ತದೆ. ಮತ್ತೊಂದು ಸರತಿಯಲ್ಲಿ ಈಗಾಗಲೇ ಸಲ್ಲಿಸಲಾಗಿದ್ದರೂ ಪರಿಹಾರವಾಗದ ಅಥವಾ ಅಸಮರ್ಪಕವಾಗಿ ಪರಿಹರಿಸಲಾದ ಅಹವಾಲುಗಳನ್ನು ಪರಿಗಣಿಸಲಾಗುತ್ತದೆ. ಈಗಾಗಲೇ **ಸಕಾಲ ಅಥವಾ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ತಂತ್ರಾಂಶದಲ್ಲಿ (IPGRS)** ದೂರು ದಾಖಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಹಾಗೂ 21 ದಿನಗಳ ನಂತರವೂ ಸಮರ್ಪಕ ಪರಿಹಾರ ಸಿಗದ ಪ್ರಕರಣಗಳನ್ನು ಎರಡನೇ ಸರತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಇದಕ್ಕಾಗಿ ಸಾರ್ವಜನಿಕರು ತಮ್ಮ **ಸಕಾಲ, CSC ಅಥವಾ IPGRS ಸಂಖ್ಯೆಯನ್ನು** ನೀಡಬೇಕಾಗುತ್ತದೆ. ಸಮಯದ ಅಭಾವ ಉಂಟಾದಲ್ಲಿ ಇಂತಹ ಅಹವಾಲುದಾರರಿಗೆ ಸಭೆಯ ಅಧ್ಯಕ್ಷತೆ ವಹಿಸುವ ಜನಪ್ರತಿನಿಧಿಯೊಂದಿಗೆ ನೇರವಾಗಿ ಸಂವಹನ ನಡೆಸಲು ಆದ್ಯತೆ ನೀಡಲಾಗುತ್ತದೆ. ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ಬಳಿಕ ಸಭೆಯ ಸಂಪೂರ್ಣ ವಿವರಗಳನ್ನು ಪೋರ್ಟಲ್ನಲ್ಲಿ ದಾಖಲಿಸಲಾಗುತ್ತದೆ. ಸಭೆಯ ಪ್ರಮುಖ ಅಂಶಗಳು, ಛಾಯಾಚಿತ್ರಗಳು, ವಿಡಿಯೋಗಳು ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು **ipgrs.karnataka.gov.in** ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1902ಕ್ಕೆ ದೂರು ಸಲ್ಲಿಸಬಹುದು ರಾಜ್ಯದ ವಿವಿಧ ಇಲಾಖೆಗಳ ಸೇವೆಗಳು ಮತ್ತು ಯೋಜನೆಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು **ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ** ರೂಪಿಸಲಾಗಿದೆ. ಸಾರ್ವಜನಿಕರು
1902 ಸಹಾಯವಾಣಿ** ಅಥವಾ ಸರ್ಕಾರದ ದೂರು ನಿವಾರಣಾ ಪೋರ್ಟಲ್ ಮೂಲಕ ತಮ್ಮ ಸಮಸ್ಯೆಗಳನ್ನು ದಾಖಲಿಸಬಹುದಾಗಿದೆ. ಪ್ರಜಾಸೇವಾ ಅಭಿಯಾನ ಸಭೆಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದು, ಸರ್ಕಾರದ ಯೋಜನೆಗಳಿಗೆ ಇರುವ ಅರ್ಹತೆ, ಲಭ್ಯವಿರುವ ಸೌಲಭ್ಯಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ. ಇದರೊಂದಿಗೆ ಉತ್ತಮ ಕಾರ್ಯಪದ್ಧತಿಗಳ ಪ್ರದರ್ಶನ, ಕುಡಿಯುವ ನೀರು ಹಾಗೂ ಮೂಲಭೂತ ವೈದ್ಯಕೀಯ ಸೌಲಭ್ಯಗಳನ್ನೂ ಕಲ್ಪಿಸಲಾಗುತ್ತದೆ.
ಪ್ರತಿ ಸಭೆಯ ನಂತರ ಸ್ವೀಕರಿಸಲಾದ ಅಹವಾಲುಗಳು, ಕೈಗೊಂಡ ಕ್ರಮಗಳು, ಪರಿಹಾರದ ವಿವರಗಳು, ಛಾಯಾಚಿತ್ರಗಳು ಹಾಗೂ ವಿಡಿಯೋಗಳನ್ನು ಪೋರ್ಟಲ್ನಲ್ಲಿ ದಾಖಲಿಸಲಾಗುತ್ತದೆ. ಬಾಕಿ ಉಳಿದಿರುವ ಸಮಸ್ಯೆಗಳ ಕುರಿತು **ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮೇಲ್ವಿಚಾರಣೆ** ನಡೆಸಲಿದ್ದಾರೆ.
ಗ್ರಾಮ ಒನ್ನಲ್ಲಿಯೇ ಅರ್ಜಿ ಸಲ್ಲಿಕೆ ಸಾರ್ವಜನಿಕರು ತಮ್ಮ ಅರ್ಜಿಗಳು ಹಾಗೂ ಅಹವಾಲುಗಳನ್ನು ಸಭೆಗೂ ಮುನ್ನವೇ **ಗ್ರಾಮ ಒನ್ ಕೇಂದ್ರಗಳಲ್ಲಿ** ಸಲ್ಲಿಸಬಹುದಾಗಿದೆ.
ಸಭೆ ನಡೆಯುವ ಸ್ಥಳದಲ್ಲಿಯೂ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಿ ಕಂಪ್ಯೂಟರ್, ಮುದ್ರಕ ಹಾಗೂ ಅಂತರ್ಜಾಲ ಸೌಲಭ್ಯ ಒದಗಿಸಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಆನ್ಲೈನ್ ಮೂಲಕ ಅರ್ಜಿ ಹಾಗೂ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಸ್ಥಳದಲ್ಲಿಯೇ ಸೇವೆ ಮತ್ತು ಪರಿಹಾರ ಪ್ರಜಾಸೇವಾ ಅಭಿಯಾನದ ವೇಳೆ ಅರ್ಹತೆ ಹೊಂದಿರುವ ಯೋಜನಾ ಫಲಾನುಭವಿಗಳಿಗೆ **ಮಂಜೂರಾತಿ ಪತ್ರಗಳನ್ನು ಸ್ಥಳದಲ್ಲಿಯೇ ವಿತರಿಸುವ** ವ್ಯವಸ್ಥೆ ಮಾಡಲಾಗುತ್ತದೆ.
ಈಗಾಗಲೇ ಪರಿಹರಿಸಲಾದ ಅಹವಾಲುಗಳಿಗೆ ಸಂಬಂಧಿಸಿದಂತೆ ಅಗತ್ಯ ಅನುಮೋದನೆ ಹಾಗೂ ದೃಢೀಕರಣ ಪತ್ರಗಳನ್ನು ಸಹ ಸ್ಥಳದಲ್ಲಿಯೇ ನೀಡಲು ಅವಕಾಶವಿರಲಿದೆ. **ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ, ಸರ್ಕಾರಿ ಸೇವೆಗಳನ್ನು ಜನರ ಬಳಿಗೆ ತಲುಪಿಸುವುದು ಹಾಗೂ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವುದು ಪ್ರಜಾಸೇವಾ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.**
Recent comments